ಝೈಗೊಕ್ಯಾಕ್ಟಸ್
	ಕ್ಯಾಕ್ಟೇಸೀ ಕುಟುಂಬಕ್ಕೆ ಸೇರಿದ ಒಂದು ಕಳ್ಳಿಜಾತಿಯ ಗಿಡ. ಎಪಿಫಿಲಮ್ ಎಂಬ ಹೆಸರೂ ಉಂಟು. ಇದರ ಕಾಂಡದ ಕವಲುಗಳು ಏಡಿಯ ಕಾಲಿನಂತೆ ಇರುವುದರಿಂದ ಇದನ್ನು ಏಡಿಕಳ್ಳಿ ಎಂದೂ ಕರೆಯಲಾಗುತ್ತದೆ. ಇದು ಆರ್ಕಿಡ್ಡುಗಳಂತೆ ಮರದ ಮೇಲೆ ಅಪ್ಪುಸಸ್ಯವಾಗಿ ಬೆಳೆಯುತ್ತದೆ. ಇದನ್ನು ಅಲಂಕಾರಕ್ಕಾಗಿ ಕುಂಡಗಳಲ್ಲಿ ಕಲ್ಲೇರಿಗಳಲ್ಲಿ ಮತ್ತು ಗೂತು ಬುಟ್ಟಿಗಳಲ್ಲಿ ಬೆಳೆಸುತ್ತಾರೆ. ಇದರ ತವರು ಬ್ರಜಿಲ್. ಇದರ ಕಾಂಡ ಚಪ್ಪಟೆಯಾದ ಖಂಡಗಳಿಂದ ಕೂಡಿದೆ. ವಯಸ್ಸಾದ ಅನಂತರ ಗುಂಡಗಾಗುತ್ತದೆ. ಕಾಂಡದ ಬಣ್ಣ ಹಸಿರು. ಅಂಚು ದಂತಿತವಾಗಿದೆ. ಕಾಂಡದ ತುದಿಯೆಡೆಗೆ ಕೆಲವೊಮ್ಮೆ ಮುಳ್ಳುಗಳುಳ್ಳ ರಚನೆಗಳುಮಟು. ಹೂಗಳು ದ್ವಪಾಶ್ರ್ವ ಸಮಾಂಗತೆಯುಳ್ಳವು. ಹೂಗಳ ಬಣ್ಣ ಕೆಂಪು. ಫಲ ಪೇರಿ ಹಣ್ಣಿನಂತಿದೆ. ಜೈಗೊಕ್ಯಾಕ್ಟಸನ್ನು ಕಾಂಡತುಂಡುಗಳ ಮೂಲಕ ಬೆಳೆಸಬಹುದು. ಅಲ್ಲದೆ ಇದನ್ನು ಬೇರೆ ಕಳ್ಳಿಗಿಡಗಳಾದ ಪೆರಸ್ಕಿಯ, ಸಿರಿಯಸ್ ಮುಂತಾದವುಗಳೊಂದಿಗೆ ಕಸಿ ಮಾಡುವುದೂ ಉಂಟು.
(ಬಿ.ಎ.ಸಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ